ಬಾಷ್ಪಖನಿಜನ   -	
ಹಿರಿಗಾವಿನಲ್ಲಿರುವ ಮಾಗ್ಮಗಳಿಂದ ಹೊರಹೊಮ್ಮುವ ಆವಿಗಳಿಂದ ಖನಿಜಗಳೂ ಅದುರುಗಳೂ ರೂಪುಗೊಳ್ಳುವ ಪ್ರಕ್ರಿಯೆ (ನ್ಯೂಮಟಾಲಿಸಿಸ್). ಇಂಥ ಆವಿ ತಣ್ಣಗಿರುವ ಮೇಲ್ಭಾಗ ಮತ್ತು ಇಕ್ಕೆಲದ ಸ್ಥಳೀಯ ಶಿಲೆಗಳಲ್ಲಿ ಪಸರಿಸಿ ಸಂಯೋಜಿತ ಲೋಹಧಾತುಗಳು ಆ ಶಿಲೆಗಳ ಬಿರುಕುಗಳಲ್ಲಿಯೂ ರಂಧ್ರಗಳಲ್ಲಿಯೂ ಶೇಖರವಾಗಿ ಅದುರುನಿಕ್ಷೇಪಗಳಾಗುವುವು. ಹೀಗೆ ರೂಪುಗೊಂಡ ಖನಿಜ ನಿಕ್ಷೇಪಗಳಿಗೆ ಅನಿಲ ರಚಿತ ನಿಕ್ಷೇಪಗಳೆಂದು ಹೆಸರು.

ಹಲವು ಭೂಗರ್ಭ ವಿಜ್ಞಾನಿಗಳ ಅಭಿಪ್ರಾಯದ ಮೇರೆಗೆ ಶಿಲಾಪಾಕದಿಂದ ಲೋಹಗಳನ್ನು ಆದಿಯಲ್ಲಿ ಬೇರ್ಪಡಿಸಿ, ಇಕ್ಕೆಲದ ಶಿಲಾಸಮುದಾಯಕ್ಕೆ ಕೊಂಡೊಯ್ಯುವುದಕ್ಕೆ ಈ ಆವಿಯೇ ಮುಖ್ಯಕಾರಣ. ರೂಪಾಂತರ ಅದುರು ನಿಕ್ಷೇಪಗಳನ್ನು ಮೊದಲಿನಿಂತಲೂ ಸ್ಥಳೀಯ ಶಿಲೆಗಳ ಮೇಲೆ ಈ ಆವಿಯ ಸಂಪರ್ಕ ರೂಪಾಂತರವೆಂದು ಪರಿಗಣಿಸಿದ್ದಾರೆ. ಉದಾಹರಣೆಗೆ ಬೋರಾನನ್ನು ಒಳಗೊಂಡ ಆವಿ ಟೂರ್ ಮಲೀನ್ ಖನಿಜವನ್ನು ರೂಪಿಸುವುದಲ್ಲದೆ ಗ್ರಾನೈಟ್ ಶಿಲೆಗಳ ಮೇಲೆ ಹಳದಿ ಛಾಯೆಯನ್ನು ಉಂಟುಮಾಡುತ್ತದೆ ಕೂಡ. ಅಲ್ಲದೆ ಕ್ರಮೇಣ ಈ ಶಿಲೆ ಗ್ರೈಸೆನ್ ಆಗಿ ಪರಿವರ್ತನಗೊಳ್ಳುತ್ತದೆ.

ಆವಿಯ ಚಟುವಟಿಕೆಯಿಂದ ಲೋಹನಿಕ್ಷೇಪಗಳು ಉಂಟಾಗುವ ಸಿದ್ಧಾಂತವನ್ನು ಪ್ರಯೋಗಶಾಲೆಯಲ್ಲಿ ಕೂಡ ಸಮರ್ಥಿಸಲಾಗಿದೆ. ಶಿಲಾಪಾಕದಿಂದ ಲೋಹಗಳು ಬೇರ್ಪಡಲು ಇದೊಂದೇ ಮಾರ್ಗವೆಂದೂ ಹಲವರು ವಾದಿಸಿದ್ದಾರೆ. ಶಿಲಾಪಾಕದ ಕೋಠಿಯಿಂದ ಹೊರಬರುವ ಆವಿ ಹೆಚ್ಚಾಗಿ ಹೈಡ್ರೊಕ್ಲೋರಿಕ್ ಆಮ್ಲ, ಇಂಗಾಲಾಮ್ಲ, ಸಲ್‍ಫ್ಯೂರಿಕ್ ಆಮ್ಲಗಳನ್ನು ಒಳಗೊಂಡಿರುವುದರಿಂದ ಆಮ್ಲ ಭಾಗ ಹೆಚ್ಚಾಗಿರುವುದು. ಅದೂ ಅಲ್ಲದೆ ಬೊವೆನ್ ಎಂಬ ಶಿಲಾವಿಜ್ಞಾನಿ ಬೆಲೆಬಾಳುವ ಲೋಹ ಖನಿಜಗಳನ್ನು ಈ ಆವಿ ಅನಿಲಗಳಿಂದ ಬೇರ್ಪಡಿಸಿದ್ದಾನೆ. ಅಲಾಸ್ಕಾದಲ್ಲಿರುವ ಕಟ್ಮಾಯ್ ಶಿಲಾಪಾಕದಿಂದ ನಮ್ಮ ಕಣ್ಣಿಗೆ ಕಾಣಿಸುವಂತೆ ಹೊರಕ್ಕೆ ಬರುತ್ತಿರುವ ಆವಿಯ ಅಧ್ಯಯನ ಈ ಅಭಿಪ್ರಾಯವನ್ನು ಸಮರ್ಥಿಸಿದೆ.			(ಟಿ.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ